ಫಲ್ಗೋರಿಡೀ
ಹೆಮಿಪ್ಟರ ವರ್ಗಕ್ಕೆ ಸೇರಿದ ಕೀಟ ಕುಟುಂಬ. ಇದರ ಸದಸ್ಯಗಳು ಆಕಾರದಲ್ಲಿ ಎಲೆಕೀಟಗಳಂತಿವೆ. ಇವುಗಳ ಕಣ್ಣಿನ ಕೆಳಭಾಗದಲ್ಲಿ ಕುಡಿಮೀಸೆ ಇದ್ದು ಅದು ನೇರವಾಗಿ ತಲೆಗೆ ಅಂಟಿಕೊಂಡಿದೆ. ಕುಡಿಮೀಸೆಯ ಮೊದಲನೆಯ ಎರಡು ಖಂಡಗಳು ಉಳಿದ ಖಂಡಗಳಿಗಿಂತ ದೊಡ್ಡವು. ಕೆಲವು ಪ್ರಭೇದಗಳು ಉಗುಳು ತಿಗಣಿಯಂತೆ, ಕೆಲವು ಎಲೆಕೀಟಗಳಂತೆ, ಇನ್ನು ಕೆಲವು ಅಗಲವಾದ ಬೀಜಗಳಂತೆ ಇರುತ್ತವೆ. ತಲೆಯ ಮುಂಭಾಗದಲ್ಲಿ ಬಾಗಿರುವ ಕೃಶವಾದ ಕೊಂಬಿನಾಕೃತಿಯ ಪ್ರಕ್ಷೇಪಣವುಂಟು. ರೆಕ್ಕೆಗಳು ತಮ್ಮ ಆಕಾರ, ನರರಚನೆ ಮತ್ತು ಬಣ್ಣಗಳಲ್ಲಿ ವಿವಿಧ ಪ್ರಭೇದಗಳಲ್ಲಿ ಬೇರೆ ಬೇರೆಯಾಗಿವೆ. ಕೆಲವೊಮ್ಮೆ ರೆಕ್ಕೆ ಮುಚ್ಚಿದಾಗಲೂ ಹೊಟ್ಟೆಯ ಭಾಗಗಳು ಹೊರಚಾಚಿಕೊಂಡಿರುತ್ತವೆ. ರೆಕ್ಕೆಯ ಹರವು ಸುಮಾರು 150 ಮಿ ಮೀ. ರೆಕ್ಕೆಗಳು ಸಾಮಾನ್ಯವಾಗಿ ಸಂಪೂರ್ಣ ಅಥವಾ ಅರೆಪಾರದರ್ಶಕವಾಗಿದೆ. ಕೆಲವು ಪ್ರಭೇದಗಳಲ್ಲಿ ರೆಕ್ಕೆಯ ಬಣ್ಣವೂ ದೇಹದ ಬಣ್ಣವೂ ಒಂದೇ, ಇನ್ನು ಕೆಲವು ಪ್ರಭೇದಗಳಲ್ಲಿ ದೇಹ ಮಸಕುವರ್ಣದ್ದಾದರೂ ರೆಕ್ಕೆಗಳು ವರ್ಣಮಯವಾಗಿರುತ್ತವೆ. ಕಣ್ಣುಗಳಲ್ಲಿ ಎರಡು ಅಥವಾ ಅಪರೂಪವಾಗಿ ಮೂರು ಸರಳನೇತ್ರಗಳಿವೆ. ಪೊರೆಹುಳುಗಳ ಹೊರಮೈಗೆ ಬಿಳಿ ಅಂಟಿನಂಥ ವಸ್ತು ಮೆತ್ತಿಕೊಂಡಿರುತ್ತದೆ. ಕೆಲವು ಪ್ರಭೇದಗಳು ಬೊಂತೆ ಬೊಂತೆಯಾಗಿ ಈ ವಸ್ತುವನ್ನು ಸ್ರವಿಸುತ್ತವೆ. ಪೈರೊಪ್ಸ್ ಚೆನಾಲಿ ಎಂಬುದು ಭಾರತದಲ್ಲಿ ಕಂಡುಬರುವ ಸಾಮಾನ್ಯ ಪ್ರಭೇದ. ಫಲ್ಗೋರ ಡೆಲೆನ್ಸಿರ್ಟಿ ಎಂಬ ಪ್ರಭೇದ ಹಿಂಡುಗಟ್ಟಿಕೊಂಡು ಹುಣಸೆ ಮರಗಳಲ್ಲಿರುವುದನ್ನು ದಕ್ಷಿಣಭಾರತದಲ್ಲಿ ಕಾಣಬಹುದು. 
(ಎಸ್.ಎನ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ